 ದೇಶದ ಆಹಾರ ಸಮಸ್ಯೆಯ ಪರಿಹಾರಕ್ಕಾಗಿ ಭಾರತ ಸರ್ಕಾರ ಅನೇಕ ಕ್ರಮಗಳನ್ನು ಕೈಕೊಂಡಿದೆ. ಸರ್ಕಾರದ ಆಹಾರ ನೀತಿಗೆ ಮೂರು ಗುರಿಗಳಿರಬೇಕೆಂಬುದಾಗಿ ಆಹಾರಧಾನ್ಯ ನೀತಿ ನಿರೂಪಣಾ ಸಮಿತಿ ಸೂಚಿಸುತ್ತದೆ. ಉತ್ಪಾದನೆಯಲ್ಲಿ ಸ್ವಸಂಪೂರ್ಣತೆ, ಹವಣಾದ ವಿತರಣೆ, ಆಹಾರದ ಬೆಲೆಯಲ್ಲಿ ಸ್ಥಿರತೆಯ ಸ್ಥಾಪನೆ-ಈ ಎಲ್ಲ ದಿಕ್ಕುಗಳಲ್ಲಿಯೂ ಸರ್ಕಾರ ಸೂಕ್ತಕ್ರಮ ಕೈಗೊಂಡಿದೆ. 
ಭಾರತದಲ್ಲಿ ಆಹಾರಾಭಾವವನ್ನು ಪರಿಹರಿಸಲು ಇತರ ದೇಶಗಳಿಂದ ಆಹಾರ ಧಾನ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಬಹುಭಾಗ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಬರುತ್ತಿದೆ. ಪಬ್ಲಿಕ್ ಲಾ 480ರ ಪ್ರಕಾರ ಅಮೆರಿಕದಿಂದ ತರಿಸಿಕೊಳ್ಳುತ್ತಿರುವ ಆಹಾರಧಾನ್ಯವನ್ನು ಭಾರತದಲ್ಲಿ ಮಾರಾಟ ಮಾಡಿ, ಬಂದ ಹಣವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರದ ಹೆಸರಿನಲ್ಲಿ ಭಾರತದಲ್ಲೆ ಇಡುವ ವ್ಯವಸ್ಥೆಮಾಡಿದೆ. ಭಾರತದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಈ ಹಣ ಸಾಲವಾಗಿ ದೊರಕುತ್ತದೆ. ಧಾನಧರ್ಮಕಾರ್ಯಗಳಿಗೂ ಈ ಹಣ ಒದಗುತ್ತದೆ. ಈ ಕ್ರಮದಿಂದ ಭಾರತದ ಆಹಾರ ಸಮಸ್ಯೆ ಸ್ವಲ್ಪಮಟ್ಟಿಗೆ ಉಪಶಮನವಾಗಿರುವುದಾದರೂ ವಿದೇಶಿ ಸರ್ಕಾರವೊಂದರ ಲೆಕ್ಕದಲ್ಲಿ ಕೋಟ್ಯಂತರ ರೂಪಾಯಿಗಳು ಭಾರತದಲ್ಲಿ ಶೇಖರವಾಗಿರುವುದರ ಶುಭಾಶುಭಫಲಗಳ ವಿಚಾರದಲ್ಲಿ ವಿವಾದವೂ ಉಂಟಾಗಿದೆ (ನೋಡಿ-ಪಿ.ಎಲ್. 480). ಆದರೆ ಸಂಕಟಕಾಲದಲ್ಲಿ ಬಂದ ಈ ವಿದೇಶೀ ನೆರವಿನಿಂದ ಬಿಕ್ಕಟ್ಟನ್ನು ದಾಟಲು ಸಹಾಯವಾಗಿದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ